ನರೇಗಾ ಯೋಜನೆಯ ಸಾಲದ ಮಿತಿ ಹೆಚ್ಚಳ.

ನರೇಗಾ ಯೋಜನೆಯ ಸಾಲದ ಮಿತಿ ಹೆಚ್ಚಳ.

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಕುಟುಂಬದ ವೈಯಕ್ತಿಕ ಕಾಮಗಾರಿಗಳ ಆರ್ಥಿಕ ಮಿತಿಯನ್ನು ಹೆಚ್ಚಿಸಲು ರಾಜ್ಯ ಸರಕಾರ ಮುಂದಾಗಿದೆ.

ಈ ವಿಚಾರವಾಗಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಉದ್ಯೋಗ ಖಾತರಿ ಪರಿಷತ್ತಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರತಿ ಕುಟುಂಬಕ್ಕೆ ಈಗಿರುವ ವೈಯಕ್ತಿಕ ಸೌಲಭ್ಯಗಳ ಆರ್ಥಿಕ ಮಿತಿಯನ್ನು 2.50 ಲಕ್ಷದಿಂದ 3.50 ಲಕ್ಷ ರೂ.ಗೆ ಹೆಚ್ಚಿಸಲು ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರಕಾರದಿಂದ ಅನುಮೋದನೆ ಸಿಕ್ಕ ತತ್‌ಕ್ಷಣ ಪರಿಷ್ಕೃತ ಆರ್ಥಿಕ ಮಿತಿ ಅನುಷ್ಠಾನಕ್ಕೆ ಬರಲಿದೆ.

ವೈಯಕ್ತಿಕ ಸೌಲಭ್ಯಗಳ ಆರ್ಥಿಕ ಮಿತಿ ಹೆಚ್ಚಿಸುವಂತೆ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಪ್ರಸ್ತಾವನೆ ಮಂಡಿಸಿ, ರೈತರು ಬದು, ತೋಟಗಾರಿಕೆ, ಕೃಷಿಹೊಂಡ, ರೇಷ್ಮೆ, ಜಾನುವಾರು ಶೆಡ್‌ ಸಹಿತ ಯೋಜನೆಯಡಿ ಸಿಗುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ಈ ಮಿತಿಯನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಬಹುದಾಗಿದೆ ಎಂದರು.

ಅದರಂತೆ, ಪ್ರತಿ ಕುಟುಂಬದ ವೈಯಕ್ತಿಕ ಆರ್ಥಿಕ ಮಿತಿಯನ್ನು ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ಆರ್ಥಿಕ ಮಿತಿಗೆ ಅನುಮೋದನೆ ಸಿಗುವವರೆಗೆ ಈಗಿರುವ 2.50 ಲಕ್ಷ ರೂ.ಗಳ ಆರ್ಥಿಕ ಮಿತಿಯೇ ಮುಂದುವರಿಯಲಿದೆ. 2.50 ಲಕ್ಷ ರೂ. ಆರ್ಥಿಕ ಮಿತಿಯನ್ನು 2020ರ ಜೂನ್‌ ತಿಂಗಳಲ್ಲಿ ನಿಗದಿಪಡಿಸಲಾಗಿತ್ತು. ಬೇಡಿಕೆ ಹಿನ್ನೆಲೆಯಲ್ಲಿ ಅದನ್ನು ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ.

ನರೇಗಾ ಯೋಜನೆಯಡಿ ವಿವಿಧ ವೈಯಕ್ತಿಕ ಸೌಲಭ್ಯಗಳನ್ನು ರೈತರಿಗೆ ನೀಡಲು ತಗಲುವ ವೆಚ್ಚದ ಎರಡು ಮಾದರಿಗಳನ್ನು ಪ್ರಸ್ತಾಪಿಸಲಾಗಿದೆ.

ಇತರ ರಾಜ್ಯಗಳಲ್ಲಿ ವೈಯಕ್ತಿಕ ಸೌಲಭ್ಯಗಳ ಆರ್ಥಿಕ ಮಿತಿ 2 ಲಕ್ಷ ರೂ. ಇದೆ. ರಾಜ್ಯದಲ್ಲಿ ಮಿತಿಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಎಷ್ಟು ರೈತ ಕುಟುಂಬಗಳು 2.50 ಲಕ್ಷ ರೂ.ಗಿಂತ ಹೆಚ್ಚಿನ ಸೌಲಭ್ಯ ಪಡೆದಿದ್ದಾರೆಂಬ ಮಾಹಿತಿಯನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚರ್ಚೆ ಬಳಿಕ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ನೀಡಲಾಗುವ ವೈಯಕ್ತಿಕ ಸೌಲಭ್ಯದ ಆರ್ಥಿಕ ಮಿತಿಯನ್ನು ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.

ಯೋಜನೆಯ ಸೌಲಭ್ಯ ಪಡೆಯಲು ಯಾರು ಅರ್ಹರು

ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹ ಫ‌ಲಾನುಭವಿ (ಪ್ರತಿ ಕುಟುಂಬ) ಎಸ್ಸಿ, ಎಸ್ಟಿ, ಅಲೆಮಾರಿ ಬುಡಕಟ್ಟು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂ-ಸುಧಾರಣ ಕುಟುಂಬಗಳು, ವಸತಿ ಯೋಜನೆಗಳ ಫ‌ಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ-2006ರ ಫ‌ಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಇವುಗಳ ಪೈಕಿ ಯಾವುದಾದರೂ ಒಂದು ವರ್ಗದಲ್ಲಿ ಅರ್ಹರಾಗಿರುವವರು ಆರ್ಥಿಕ ಮಿತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ನಿರ್ಬಂಧನೆಗಳು

ಫ‌ಲಾನುಭವಿಯು (ಅರ್ಹ ಕುಟುಂಬ) ಕಡ್ಡಾಯವಾಗಿ ನರೇಗಾ ಯೋಜನೆಯ ಜಾಬ್‌ಕಾರ್ಡ್‌ ಹೊಂದಿರಬೇಕು.
– ಫ‌ಲಾನುಭವಿಗೆ ನೀಡಲಾದ ವೈಯಕ್ತಿಕ ಕಾಮಗಾರಿಯಲ್ಲಿ ಆತನ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಾದರೂ ಕೆಲಸ ನಿರ್ವಹಿಸಬೇಕು.

ನರೇಗಾ ಯೋಜನೆ

Leave a Comment